ನಿಟ್ಟೂರು 2-
	ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಒಂದು ಗ್ರಾಮ. ಇದೇ ತಾಲ್ಲೂಕಿನ ಇನ್ನೊಂದು ಗ್ರಾಮದಲ್ಲಿ ದೊರಕಿದ ಶಾಸನವೊಂದರಲ್ಲಿ ಇದನ್ನು ಗಂಗವಾಡಿ ತೊಂಬತ್ತಾರು ಸಾಯಿರಕೆ ನಾಭಿಯ ಮನೆಯುಂ ತೆಂಕಣಯ್ಯಾವಳೆಯುಮೆನಿಸಿದ ಮಹಾಪಟ್ಟಣ ನಿಟ್ಟೂರ ಸ್ಥಳ-ಎಂದು ವರ್ಣಿಸಿದೆ.

	ಇಲ್ಲಿ 12-13ನೆಯ ಶತಮಾನದ್ದೆನ್ನಲಾದ ಹೊಯ್ಸಳ ಶೈಲಿಯ ಒಂದು ಸುಂದರ ಜೈನ ಬಸದಿಯಿದೆ. ಬಸದಿಯಲ್ಲಿ ಗರ್ಭಗೃಹ, ಸುಕನಾಸಿ, ನವರಂಗಗಳಿವೆ. ಒಳಗೆ ಶಾಂತೀಶ್ವರ, ಆದೀಶ್ವರ ಮೂರ್ತಿಗಳಿವೆ. ನವರಂಗದ ದ್ವಾರವನ್ನು ಕಲಾತ್ಮಕವಾಗಿ ಕೆತ್ತಲಾಗಿದೆ. ಭುವನೇಶ್ವರಿಗಳು ಸುಮಾರು 0.78 ಮೀ. ಆಳವಿದ್ದು ಸುಂದರ ಅಷ್ಟದಿಕ್ಪಾಲಕ ಮೂರ್ತಿಗಳಿಂದ ಒಡಗೂಡಿವೆ. ಕಟ್ಟಡದ ವಿಶೇಷವೆಂದರೆ ಜಗತಿಯಿಲ್ಲದಿರುವುದು. ಆದರೆ ಸೊಗಸಾದ ಕುಮುದವಿದೆ. ಆಲಯದ ಹೊರಭಿತ್ತಿಯನ್ನು ಮಲ್ಲಿಶೆಟ್ಟಿಯೆಂಬಾತ ಕಟ್ಟಿಸಿದುದಾಗಿ ಇಲ್ಲಿನ ಶಾಸನವೊಂದರಲ್ಲಿ ಬರೆದಿದೆ. ಈ ಶಾಸನವಲ್ಲದೆ ಇನ್ನೂ ಕೆಲವು ನಿಷಿಧಿ ಶಾಸನಗಳೂ ಇಲ್ಲಿವೆ.

	ಈ ಊರಿನಲ್ಲಿ ಮಾರಿಯಮ್ಮನ ದೇವಸ್ಥಾನವಿದ್ದು ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಚಂದ್ರಪ್ರಭಷಟ್ಪದಿ ಗ್ರಂಥವನ್ನು ಬರೆದ (ಕ್ರಿ.ಶ. 1578) ದೊಡ್ಡಣ ಈ ಊರಿನವ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ